ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಡುತ್ತಿದ್ದ ಐವರ ಬಂಧನ: ರಾಮಾಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ

Apr 3, 2025 - 20:09
 2
Facebook Join WhatsApp Join Telegram Live

ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಡುತ್ತಿದ್ದ ಐವರ ಬಂಧನ: ರಾಮಾಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ

NewsPin Desk.

ಚಾಮರಾಜನಗರ: ಜಮೀನುಗಳಲ್ಲಿ ಮೇವು ಮೇಯಲು ತೆರಳುತ್ತಿದ್ದ ಜಾನುವಾರುಗಳ ಮೇವಿಗೆ ನಾಡಬಾಂಬ್ ಇಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹನೂರು ತಾಲೂಕಿನ ರಾಮಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ನಾರಾಯಣಸ್ವಾಮಿ, ಶಿವಣ್ಣ ಹನೂರು ತಾಲೂಕಿನ ಚಿಕ್ಕಲತ್ತೂರು ಗ್ರಾಮದ ಜಡೆಯಪ್ಪ,ಈತನ ಮಗ ರುದ್ರ, ಭದ್ರಯ್ಯನಹಳ್ಳಿ ಗ್ರಾಮದ ಶ್ರೀರಂಗಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ನಾರಾಯಣಸ್ವಾಮಿ ರವರಿಂದ 43 ಜೀವಂತ ನಾಡ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.


ಜಮೀನುಗಳಲ್ಲಿ ಮೇವು ಮೇಯಲು ತೆರಳುತ್ತಿದ್ದ ಜಾನುವಾರುಗಳನ್ನು ಗುರಿಯಾಗಿಸಿಕೊಂಡು ಮೇವಿನ ಮಧ್ಯ ನಾಡ ಬಾಂಬ್ ಇಟ್ಟು ತೆರಳುತ್ತಿದ್ದರು. ಹಸುಗಳು ಮೇವು ಮೇಯುವಾಗ ನಾಡ ಬಾಂಬ್ ಗಳನ್ನು ಮೇವು ಎಂದು ಜಿಗಿಯುವಾಗ  ಸ್ಫೋಟಗೊಂಡು ಜಾನುವಾರುಗಳ ಮುಖ ಛಿದ್ರ ವಾಗುತ್ತಿತ್ತು. ಮೂಕ ಪ್ರಾಣಿಗಳು ನೋವು ತಾಳಲಾರದೆ, ಮೇವು ಮೇಯಲಾಗದೆ ನರಳಾಡಿ ಪ್ರಾಣ ಬಿಡುತ್ತಿದ್ದವು. 

ಈ ಸಂಬಂಧ ಹನೂರು ಹಾಗೂ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 ಜಾನುವಾರುಗಳ ಮುಖ ಸಿಡಿದು ಮೃತಪಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಟಿ ಕವಿತಾರವರು ವಿಶೇಷ ತಂಡ ರಚನೆ ಮಾಡಿ ತಪ್ಪಿತಸ್ಥರ ಬಂಧನಕ್ಕೆ ಬಲೆ ಬೀಸಲಾಗಿತ್ತು. ಈ ಸಂಬಂಧ ಫೆಬ್ರವರಿ 25ರಂದು   ನಾಡ ಬಾಂಬ್  ಇಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು, ಜೀವಂತ ಇಪ್ಪತ್ತು ನಾಡ ಬಾಂಬ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಇದಾದ ನಂತರವೂ ಬೂದಬಾಳು ಹಾಗೂ ಕೌದಳ್ಳಿ  ಹೊರ ವಲಯದ ಕುರಟ್ಟಿ ಹೊಸೂರು ರಸ್ತೆ, ಕೌದಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಸಮೀಪವು ನಾಡ ಬಾಂಬ್ ಕಚ್ಚಿ ಹಸುಗಳ ಮುಖ ಛಿದ್ರವಾಗಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ  ಆರೋಪಿಗಳ ಪತ್ತೆಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ಎಸ್ ಪಿ ಡಾ. ಬಿ ಟಿ ಕವಿತಾ ಹಾಗೂ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಿಕ್ಕ ರಾಜ ಶೆಟ್ಟಿ, ಸಬ್ ಇನ್ಸ್ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ   ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ಜಿಲ್ಲಾಧಿಕಾರಿಗಳಾದ ಸಿಟಿ ಶಿಲ್ಪಾ ನಾಗ್ ರವರ ಮೌಖಿಕ ಆದೇಶದಂತೆ ಹನೂರು ತಹಸಿಲ್ದಾರ್ ವೈ ಕೆ ಗುರುಪ್ರಸಾದ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಾಡ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗೃತಿ ಸಭೆ ಸಹ ನಡೆಸಿದ್ದರು. ಸಭೆ ನಡೆಯುತ್ತಿದ್ದ ವೇಳೆಯೇ  ಕೌದಳ್ಳಿ ಪೆಟ್ರೋಲ್ ಬಂಕ್ ಸಮೀಪ ನಾಡ ಬಾಂಬ್ ತಿಳಿದು ಹಸುವಿನ ಮುಖ ಛಿದ್ರವಾಗಿತ್ತು.


ಗುರುವಾರ ರಾಮಾಪುರ ಪೊಲೀಸ್ ಠಾಣೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಭೇಟಿ ನೀಡಿ ಆರೋಪಿಗಳಿಂದ ಕೃತ್ಯದ ಸಂಬಂಧ  ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.


ಕೌದಳ್ಳಿ ಭಾಗದಲ್ಲಿ ನಾಡ ಬಾಂಬ್ ಸ್ಫೋಟ ಪ್ರಕರಣಕ್ಕೆ ಹೆಚ್ಚು ಜಾನುವಾರುಗಳು ಬಲಿಯಾಗಿದ್ದವು.  ತೆಳ್ಳನೂರು ಭಾಗದಲ್ಲಿ ಇದುವರೆಗೂ ಯಾವುದೇ ಪ್ರಕರಣಗಳು ಕಂಡು ಬಂದಿರಲಿಲ್ಲ, ಆದರೆ ಬುಧವಾರ ರಾತ್ರಿ ಕರಡಿಯು ಸಹ ನಡಬಾಂಬ್ ಸಿಡಿದು ಮೃತಪಟ್ಟಿರುವುದರಿಂದ ಈ ಭಾಗದಲ್ಲಿಯೂ ಕಿಡಿಗೇಡಿಗಳು ಇನ್ನು ಹೆಚ್ಚಿನ ನಾಡ ಬಾಂಬ್ ಇಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.


ಒಟ್ಟಾರೆ ನಾಡ ಬಾಂಬ್ ಇಟ್ಟು ಜಾನುವಾರುಗಳ ಸಾವಿಗೆ ಕಾರಣರಾಗಿದ್ದ ಏಳು ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದೆ. ತನಿಖೆ ಪ್ರಗತಿ ಹಂತದಲ್ಲಿದ್ದು ಸಮಗ್ರ ವಿಚಾರಣೆ ನಡೆಸಿದರೆ ಇನ್ನಷ್ಟು ಆರೋಪಿಗಳು ಸಿಕ್ಕಿ ಬೀಳುವರೇ ಎಂಬುವುದು ಪೋಲಿಸ್ ತನಿಖೆಯಿಂದಷ್ಟೇ ಸತ್ಯ ಹೊರ ಬರಬೇಕಿದೆ.

ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಸಾರ್ವಜನಿಕರು: ಹನೂರು, ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಡ ಬಾಂಬ್ ಇಟ್ಟು  ಜಾನುವಾರುಗಳ ( ಮೂಕ ಪ್ರಾಣಿಗಳ) ಸಾವಿಗೆ ಕಾರಣರಾಗಿದ್ದ ಏಳು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ಇದೀಗ ರೈತರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಪತ್ತೆಹಚ್ಚಲು ಶ್ರಮವಹಿಸಿದ ಎಸ್ ಟಿ, ಡಾ.ಬಿ.ಟಿ. ಕವಿತಾ, ಡಿವೈಎಸ್ಪಿ ಧರ್ಮೇಂದ್ರ ಹಾಗೂ ರಾಮಾಪುರ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಅವರಿಗೆ ಸಾರ್ವಜನಿಕರು ಅಭಿನಂದನೆ ತಿಳಿಸಿದ್ದಾರೆ.

Join WhatsApp Join Facebook Live Join Telegram

Tags: