ದೇವ ಬೊಂಬೆ, ಪೂಜೆ ಆಟ.. ಭಕ್ತಿ ಸೋಜಿಗ!

Feb 2, 2025 - 07:43
 12
Facebook Join WhatsApp Join Telegram Live

ದೇವ ಬೊಂಬೆ, ಪೂಜೆ ಆಟ.. ಭಕ್ತಿ ಸೋಜಿಗ!

NewsPin Desk.

???? ಹರ್ಷವರ್ಧನ ಶೀಲವಂತ

ಕವಿ, ದಾರ್ಶನಿಕ, ಪು.ತಿ.ನ. ಅವರ ರಂಗವಲ್ಲಿ ಕವಿತೆಯ, ಮಾರ್ಮಿಕ ಸಾಲು.

ಮೇಲುಕೋಟೆಯ ಶ್ರೀ ಚಲುವ ನಾರಾಯಣ ಸ್ವಾಮಿ ದೇಗುಲದ ಮುಂದೆ, ಬೆಳ್ಳಂಬೆಳಗ್ಗೆ ತೀರ ಹಣ್ಣು ಹಣ್ಣಾದ ಅಜ್ಜಿ ಓರ್ವಳು, ರಂಗೋಲಿ ಬಿಡಿಸುತ್ತಿದ್ದಾಳೆ..

ಕವಿ ಪು ತಿ ನ, ಮೊಮ್ಮಗಳೊಂದಿಗೆ ಭಗವಂತನ ದರ್ಶನ ಆಕಾಂಕ್ಷಿಯಾಗಿ ಬೆಟ್ಟ ಏರಿ, ಏದುಸಿರು ಬಿಡುತ್ತಾ ಬಂದಿದ್ದಾರೆ. ಆದರೆ ಮೊಮ್ಮಗಳು, ದೇವರ ಬಿಟ್ಟು! ರಂಗೋಲಿ ನೋಡಿ, ಮೈಮರೆತ ಆ ಕ್ಷಣ..ಈ ಕವಿತೆ ಹೃದಯದಲ್ಲಿ ಕವಿಗೆ ಪಡಿ ಮೂಡಿದೆ! ದೇವರೆಲ್ಲಿ ಇಹ?!

ಅವರವರ ಭಾವಕ್ಕೆ, ಭಕ್ತಿಗೆ ತಕ್ಕಂತೆ! ನಾವು ಪಡೆದು ಬಂದಷ್ಟು!

ಸುಗಮ ದರ್ಶನ, ಶಿಷ್ಟಾಚಾರ (ಪ್ರೋಟೋಕಾಲ್) ದರ್ಶನ, ವಿಐಪಿ ದರ್ಶನ, ಆರತಿ ಟಿಕೆಟ್, ಅರ್ಜೆಂಟ್ ದರ್ಶನ ಹೀಗೆ ಹತ್ತೆಂಟು ದರ್ಶನಗಳ ಮಧ್ಯೆ ದೇವರಿದ್ದ!?

ಕಾಶಿ ವಿಶ್ವನಾಥನ ವಾರಾಣಸಿಯಲ್ಲಿ, ಬೆಳಗ್ಗೆ ೧ ಗಂಟೆಯ ಕೊರೆಯುವ ಚಳಿಯಲ್ಲಿ ನಾವು, ೪-೫ ಗಂಟೆಯ ಸ್ಪರ್ಷ ದರ್ಶನಕ್ಕೆ ಹಾತೊರೆದು, ಅಭಿಷೇಕದ ಸರಂಜಾಮು ಸಮೇತ ಪಾಳಿ ಹಚ್ಚಿದ್ದೆವು. ಒಂದಿಬ್ಬರು ಏಜೆಂಟರು ನಾವಿದ್ದಲ್ಲಿಗೆ ಬಂದು, ಕಿವಿಯಲ್ಲಿ ಮೆಲ್ಲಗೆ ಬೇಗ ದರ್ಶನ ಮಾಡಿಸುವುದಾಗಿ, ₹೫೦೦ ತಲಾ ನೀಡಿದರೆ ಸಾಕು ಅಂದರು!

 ಹೀಗಿದ್ದರೂ, ಹೇಗಿದ್ದರೂ ಸುಗಮ ದರ್ಶನದ ಟಿಕೆಟ್, ತಿಂಗಳು ಮೊದಲೇ ಬುಕ್ ಆಗಿತ್ತು..ಆಯಾ ಧೈರ್ಯದ ಮೇಲೆ ನಾವು ಸೊಪ್ಪು ಹಾಕಲಿಲ್ಲ. ಇದು ಅತ್ಯುತ್ಸಾಹ ಮತ್ತು ಅತೀ ಆತ್ಮಬಲ, ಆತ್ಮವಿಶ್ವಾಸ ಅಂತ ನಮಗೆ ಆಗ ಹೊಳೆದಿರಲಿಲ್ಲ!

ಅಲ್ಲಿನ ಒಂದಿತರು, ಪಂಡಿತರು ಹಿಂಬಾಗಿಲಿನಿಂದ, ತಾವು ದುಡ್ಡು ಪಡೆದವರನ್ನು ಮಗುಮ್ಮಾಗಿ, ಕರೆ ತಂದು ಸಾಲಾಗಿ ಕರೆದೊಯ್ದು ಸ್ಪರ್ಷ ದರ್ಶನ ಮಾಡಿಸಿದರು! ನಾವು ೪ ತಾಸು ಸರತಿಯಲ್ಲಿ ಕಾಯುತ್ತಾ ನಿಂತೆವು! ಐದಾರು ಶವಗಳ ದರ್ಶನವಾಯಿತು. ಮಣಿಕರ್ಣಿಕಾ ಘಾಟ್ ದ್ವಾರದ ಎದುರೇ ನಮ್ಮ ಸರತಿ ಇತ್ತು!

ಚೂರು ಒಳಾಂಗಣ ತಲುಪುವಷ್ಟರಲ್ಲಿ, ಸ್ಪರ್ಷ ದರ್ಶನದ ಸಮಯ ಬೆಳಗ್ಗೆ ೪-೫ ಮುಗಿಯುತ್ತಾ ಬಂದಿತ್ತು. ಆಸೆ ಕಂಗಳಿಂದ ನೋಡುತ್ತಾ ನಿಂತೆವು. ಅತ್ತ ವಿಶೇಷ ವ್ಯಕ್ತಿಗಳನ್ನು ಸ್ಥಳೀಯ ಪಂಡಿತರು ಇನ್ನಿಲ್ಲದ ತಮ್ಮ ಅಲಂಕಾರಗಳಿಂದ ಶೋಭಿಸುತ್ತ, ರಾಜಾರೋಷವಾಗಿ ಕರೆದೊಯ್ದು, ದರ್ಶನ ಮಾಡಿಸಿಕೊಂಡು, ಹೊರ ಕರೆ ತರುತ್ತಿದ್ದರು! ದುಡ್ಡಿದ್ದವರ ಜಾತ್ರೆ!

ಇತ್ತ ನಮ್ಮ ಪಾಳಿಯಲ್ಲಿ ಅವಕಾಶ ಪಡೆದವರನ್ನು, ಜೀನ್ಸ್ ಪ್ಯಾಂಟ್ ಮತ್ತು ಶರ್ಟ್ ತೊಟ್ಟ ಭದ್ರತಾ ಸಿಬ್ಬಂದಿ, ಕೊರಳ ಪಟ್ಟಿ ಅಥವಾ ಬಗಲಲ್ಲಿ ಕೈ ಹಾಕಿ, ಗಿಂಡಿಯ ನೀರು ಹಾಲು ಲಿಂಗಕ್ಕೆ ಅಭಿಷೇಕ ಮಾಡುವ ಮುನ್ನವೇ ಎಳೆದು ಆಚೆ ದಬ್ಬುತ್ತಿದ್ದರು! ನಮಗೆ ಡ್ರೆಸ್ ಕೋಡ್, ಅವರಿಗಿಲ್ಲ!

ದೇವಸ್ಥಾನದ ಆವರಣದಲ್ಲಿ ತೋಳಿಲ್ಲದ ರವಿಕೆ ಮಾರುವ ಪ್ರವಾಸೋದ್ಯಮದ ಯೋಗ್ಯ ದರದ ಬಟ್ಟೆ ಅಂಗಡಿ ಬೇರೆ ನಡೆಸುತ್ತಾರೆ!

ಸುರಕ್ಷತೆಗೆ ನಿಯೋಜಿತ ಆರಕ್ಷಕ ಸಿಬ್ಬಂದಿಗೆ ನಾನು ಸರಿಯಾಗಿ ಝಾಡಿಸಿದೆ! ಅವರು ತಿರುಗಿ ನೋಡಿ ನನಗೆ ಹೇಳಿದ್ದು,

"ಇನ್ ಪಂಡಿತೋಂಕಿ ವಜಹ್ ಸೆ ಹೀ ಕಾಶಿ ಬದ್ನಾಮ್ ಹೈ; ಔರ್ ಬನಾರಸ್ ಕೀ ಪಾನ್ ಚಬಾತೆ ಈಶ್ವರ್ ಕೀ ಪೂಜಾ ಕರ್ತೆ ಏ, ಜಾನವರ್ ಸೇ ಭೀ ಬತ್ತರ್ ಹೋ ಗಯೆ, ಲೋಗೋಂ ಕೀ ಮತ್ ಮಾರೀ ಗಯೋ ಹೈ.

" ನೆಮ್ಮದಿ ಕೆಡಿಸಿಕೊಂಡು, ಹಲಹಳಿಕೆಯ ತೀರ್ಥ ಯಾತ್ರೆ ಮಾಡುವ ಬದಲು, ನಮ್ಮೂರಿನ ಶಿವಾಲಯಕ್ಕೆ ಹೋಗಿ, ಎಣ್ಣೆ ಬತ್ತಿ ಹಚ್ಚಿ ಬರುವುದರಲ್ಲಿ ದುಪ್ಪಟ್ಟು ಶಾಂತಿ ಇದೆ! ಸಮಾಧಾನವಿದೆ. ಸಂತೃಪ್ತಿ ಇದೆ. ಬುಕಿಂಗ್ ಇಲ್ಲ, ಮಧ್ಯವರ್ತಿ ಇಲ್ಲ, ಟಿಕೆಟ್ ಇಲ್ಲ.. ದೂಡಿ ದಬ್ಬುವವರಿಲ್ಲ!ಮೇಲಾಗಿ ಅವನಿಗೆ ನನ್ನ ಗುರುತು, ಪರಿಚಯವಿದೆ!

ಜನ ಮರುಳೋ.. ಜಾತ್ರಿ ಮರುಳೋ..

ಹಿರಿಯರ ಶಾಸ್ತ್ರ ಸುಳ್ಳಲ್ಲ!

ಅನುಭಾವದ ಮಾತು.

ಜೈ ಶಾಲ್ಮಲಾ ನದಿ ತಟದ ಶ್ರೀ ಸೋಮೇಶ್ವರ! 

Join WhatsApp Join Facebook Live Join Telegram

Tags: